ಭಾರತದಲ್ಲಿ ಸಮಾಜ ಕಲ್ಯಾಣ

ಪ್ರಾಚೀನ ಭಾರತದಲ್ಲಿ ಸಮಾಜ ಕಲ್ಯಾಣ ಕಾರ್ಯಗಳು ದಾನಧರ್ಮ ಮತ್ತು ಪರೋಪಕಾರಗಳ ರೂಪದಲ್ಲಿ ನಡೆಯುತ್ತಿದ್ದುವು. ಈ ವಿಷಯಗಳನ್ನು ಜನಪದ ಕಥೆಗಳಲ್ಲಿ ಐತಿಹ್ಯಗಳಲ್ಲಿ ಹಾಗೂ ಶಾಸ್ತ್ರಗ್ರಂಥಗಳಲ್ಲಿ ವರ್ಣಿಸಲಾಗಿದೆ. ಜಾತಕ ಕಥೆಗಳಲ್ಲಿ ಬೌದ್ಧಕಾಲದ ಜನಹಿತ ಕಾರ್ಯಗಳ ವಿವರಣೆಯಿದೆ. ಕೌಟಿಲ್ಯ ಅರ್ಥಶಾಸ್ತ್ರದಲ್ಲಿ (ಕ್ರಿ.ಪೂ. 321-189) ಹೇಳಿರುವ ಸಮಾಜಕಲ್ಯಾಣ ಕಾರ್ಯಗಳು ಇಂದಿಗೂ ಮಾದರಿಯಾಗಿವೆ. ಈ ಪೈಕಿ ಮುಖ್ಯವಾದವು ಸಾರ್ವಜನಿಕ ಕಾರ್ಯಗಳಿಗೆ ವಂತಿಗೆ ಕೊಡುವುದು, ಪ್ರವಾಸಿಗರಿಗೆ ಆಶ್ರಯ ಕೊಡುವುದು, ಕೆಲಸಗಾರನ ಹೆಂಡತಿ ಮಕ್ಕಳಿಗೆ ಜೀವಾಂಶ ಕೊಡುವುದು, ಬಾಲರು ವೃದ್ಧರು ಮತ್ತು ವ್ಯಾಧಿಪೀಡಿತರನ್ನು ಕಾಪಾಡುವುದು: ಅನಾಥೆ, ಬಂಜೆ ಮತ್ತು ಗರ್ಭಿಣಿಯರಿಗೆ ರಕ್ಷಣೆ, ನಿರ್ಗತಿಗೆ ಸ್ತ್ರೀ ಮತ್ತು ವೃದ್ಧ ಗಣಿಕೆಯರಿಗೆ ಹೊಟ್ಟೆಪಾಡಿಗಾಗಿ ಉದ್ಯೋಗ ಒದಗಿಸುವುದು ಇತ್ಯಾದಿ. ಪ್ರಾಚೀನ ಭಾರತದಲ್ಲಿ ರಾಜ ಮಾತ್ರವಲ್ಲ. ಶ್ರೀಮಂತರರೂ ಭೂಮಾಲಿಕರೂ ಗ್ರಾಮಪಂಚಾಯಿತಿಗಳೂ ಗ್ರಾಮದಲ್ಲಿರುವ ಅನಾಥರ, ವೃದ್ಧರ, ರೋಗಿಗಳ, ಅಂಗವಿಕಲರ, ವಿಧವೆಯರ ಸೇವೆಗೆ ಹಾಗೂ ರಕ್ಷಣೆಗೆ ಬರುತ್ತಿದ್ದ ಬಗ್ಗೆ ಮಾಹಿತಿಗಳು ದೊರೆಯುತ್ತವೆ. ಕುಟುಂಬದ ಹಿರಿಯರ ನೆನಪಿಗೆ ಧ್ರುವ ನಿಧಿಗಳನ್ನು ಸ್ಥಾಪಿಸಿ ವಿದ್ಯಾದಾನ ಮತ್ತು ಧರ್ಮಕಾರ್ಯಗಳನ್ನು ನಡೆಸುವ ಸಂಪ್ರದಾಯವಿತ್ತು. ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕ ಕಲ್ಯಾಣಕ್ಕಾಗಿ ಬಗೆಬಗೆಯ ದತ್ತಿಗಳನ್ನು ಸ್ಥಾಪಿಸುತ್ತಿದ್ದರು. ಈ ಪರಂಪರೆಯ ಅನೇಕ ಶತಮಾನಗಳಿಂದ ಮುಂದುವರಿದುಕೊಂಡು ಬಂದಿದೆ. ಮೊಗಲರ ಕಾಲದಲ್ಲಿಯೂ ಅದು ಝಕಾತ್, ಖೈರಾತ್ ದಾನಗಳ ರೂಪದಲ್ಲಿ ಹಾಗೂ ಕೆರೆ, ಬಾವಿ, ಶಾಲೆ, ಆಸ್ಟತ್ರೆ, ಧರ್ಮಶಾಲೆಗಳನ್ನು ಕಟ್ಟಿಸುವ ಮೂಲಕ ಮುಂದುವರಿಯಿತು. ಐನ್-ಎ-ಅಕ್ಬರಿಯನ್ನು ಬರೆದ ಅಬುಲ್ ಫಜಲ್ ವಿದೇಶೀ ಯಾತ್ರಿಕ ಟೆವರ್ನಿಯರ್ ಆದಿಯಾಗಿ ಅನೇಕರು ಈ ಉಜ್ಜ್ವಲ ಪರಂಪರೆಯನ್ನು ಹೊಗಳಿದ್ದಾರೆ.

ಬ್ರಿಟಿಷರ ಆಡಳಿತದಲ್ಲಿ ಭಾರತದ ಸಮಾಜಕಲ್ಯಾಣಕ್ಕೆ ಹೊಸತಿರುವು ಮೂಡಿತ್ತು. ಪ್ರಾಚೀನ ರೀತಿಯ ದಾನ-ಧರ್ಮ ಪರೋಪಕಾರದ ಕಾರ್ಯಗಳಿಗೆ ಪ್ರೋತ್ಸಾಹ ಸಿಗದೇ ಹೋದರೂ ಸಾಮಾಜಿಕ ಸಮಸ್ಯೆಗಳ ವಿರುದ್ದ ಹೋರಾಟ ಪ್ರಾರಂಭವಾಯಿತು. 19ನೆಯ ಶತಮಾನದ ಕೊನೆಗೆ ಅನೇಕ ಸಮಾಜಸೇವಾಸಂಸ್ಥೆಗಳು ಹುಟ್ಟಿಕೊಂಡವು ರೈತರ, ಕಾರ್ಖಾನೆ ಕೆಲಸಗಾರರ, ದರಿದ್ರರ, ಸ್ತ್ರೀಯರ, ಭಿಕ್ಷುಕರ, ವಿಧವೆಯರ, ದೀನದಲಿತರ, ಹರಿಜನರ ಕಲ್ಯಾಣಕ್ಕಾಗಿ ಕಾಯಿದೆಗಳೂ ವ್ಯವಸ್ಥೆಗಳೂ ರೂಪಿತವಾದವು. ಕ್ರೈಸ್ತ ಮಿಶನರಿಗಳೂ ರಾಮಕೃಷ್ಣಾಶ್ರಮ ಮುಂತಾದ ಸಂಸ್ಥೆಗಳೂ ಪಂಡಿತ ರಮಾಬಾಯಿ, ಜ್ಯೋತಿಫುಲೆ, ಮಹರ್ಷಿ ಕರ್ವೆ. ವಿ. ಆರ್. ಸಿಂಧೆ, ಗೋಪಾಲಕೃಷ್ಣಗೋಖಲೆ, ಆನಿಬೆಸೆಂಟ್, ಮಹಾತ್ಮಾಗಾಂಧೀ ಮುಂತಾದ ಸಮಾಜಸುಧಾರಕರೂ ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದರು.

ಸ್ವಾತಂತ್ರ್ಯಾನಂತರ ಸಮಾಜಕಲ್ಯಾಣಕ್ಕೆ ಹೊಸ ಚಾಲನೆ ದೊರಕಿತು. ತನ್ನ ಸಾಮಥ್ರ್ಯದ ಪರಿಮಿತಿಯೊಳಗೆ ಸರ್ಕಾರ ಪರಿಶಿಷ್ಟ ಜಾತಿ, ಬುಡಕಟ್ಟುಗಳ, ಹಿಂದುಳಿದ ಜನರ, ಸ್ತ್ರೀಯರ, ಮಕ್ಕಳ, ಯುವಕರ, ಕಾರ್ಮಿಕರ ಶೋಷಣೆ ತಪ್ಪಿಸಿ ಅವರ ಕಲ್ಯಾಣ ಸಾಧಿಸಬೇಕೆಂದು ಸಂವಿಧಾನ ಹೇಳುತ್ತದೆ. ಸಂವಿಧಾನದ 7ನೆಯ ಪರಿಶಿಷ್ಟದ ಪ್ರಕಾರ ಸಮಾಜ ಕಲ್ಯಾಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಯುಕ್ತ ಹೊಣೆ. ಈ ದಿಶೆಯಲ್ಲಿ ಅನೇಕ ಶಾಸನಗಳನ್ನು ತರುವುದರ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ ಸಮಾಜ ಕಲ್ಯಾಣ ಕಾರ್ಯಕ್ರಮಗಳೆಗೆ ಹೆಚ್ಚು ಹಣ ಪೂರೈಸುತ್ತಿರುವುದನ್ನು ಕಾಣಬಹುದು. ಮೊದಲ ನಾಲ್ಕು ಪಂಚವಾರ್ಷಿಕ ಯೋಜನೆಗಳಲ್ಲಿ (1951-69) ಸ್ತೀಯರ, ಮಕ್ಕಳ ಮತ್ತು ಅಂಗವಿಕಲರ ಕಲ್ಯಾಣಕ್ಕಾಗಿ ರೂ 123 ಕೋಟಿ ಖರ್ಚು ಮಾಡಿದರೆ ಐದನೆಯ ಪಂಚವಾರ್ಷಿಕ ಯೋಜನೆಯಲ್ಲಿ ರೂ 230 ಕೋಟಿ ನಿಗದಿಪಡಿಸಲಾಗಿದೆ.

ಒಂದು ಅರ್ಥದಲ್ಲಿ ಸಮಾಜಕಲ್ಯಾಣ ಅನೇಕ ಖಾತೆಗಳಿಗೆ ಸಂಬಂಧಿಸಿದ ವಿಷಯ. ಆಡಳಿತದ ಗೊಂದಲ ಮತ್ತು ವಿಳಂಬಗಳನ್ನು ತಪ್ಪಿಸಬೇಕಾದರೆ ಹಾಗೂ ಸರ್ಕಾರದ ಹಣ ಪೋಲಾಗದಂತೆ ನೋಡಬೇಕಾದರೆ ಅವುಗಳ ನಡುವೆ ಹೊಂದಾಣಿಕೆ ಬೇಕು. ಕಲ್ಯಾಣಕಾರ್ಯಕ್ರಮಗಳು ವಿವಿಧ ಖಾತೆಗಳಲ್ಲಿ ಹಂಚಿಹೋಗಿದ್ದುವು. ಉದಾಹರಣೆಗೆ 1958ರ ಒಂದು ಸಮೀಕ್ಷೆಯಂತೆ ಗೃಹ ವ್ಯವಹಾರಗಳ ಖಾತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗಗಳ ಕಲ್ಯಾಣ, ಹಿಂದುಳಿದವರ ಕಲ್ಯಾಣ, ಬಾಲಪರಾಧಿಗಳ ಮತ್ತು ಕೈದಿಗಳ ಕಲ್ಯಾಣ ಮುಂತಾದವನ್ನು ನೋಡಿಕೊಂಡರೆ, ಶಿಕ್ಷಣ ಖಾತೆ ಕೇಂದ್ರ ಸಮಾಜಕಲ್ಯಾಣ ಮಂಡಳಿ, ಯುವಜನಕಲ್ಯಾಣ, ಕುರುಡರ ಕಿವುಡರ ಅಂಗವಿಕಲರ ಹಾಗೂ ಮನೋವಿಕಲರ ಶಿಕ್ಷಣ ಮತ್ತು ಕಲ್ಯಾಣಗಳನ್ನು ನೋಡಿಕೊಳ್ಳುತ್ತಿತ್ತು. ಅಂಗವಿಕಲರ ಪುನರ್ವಸತಿ ಶಾಲಾ ಮಕ್ಕಳ ಆರೋಗ್ಯಸೇವೆಗಳು, ಮಾನಸಿಕ ಸ್ವಾಸ್ಥ್ಯ- ಆರೋಗ್ಯಖಾತೆಯ ಹೊಣೆಗಾರಿಕೆಯಾಗಿತ್ತು. ಗ್ರಾಮೀಣ ಸ್ತ್ರೀ ಕಲ್ಯಾಣ ಹಾಗೂ ಶಿಶುಕಲ್ಯಾಣ ಸಮುದಾಯ ಅಭಿವೃದ್ದಿ ಖಾತೆಗೆ ಸೇರಿತ್ತು. 1959ರಲ್ಲಿ ನೇಮಕಗೊಂಡ ಅಧ್ಯಯನ ತಂಡವೊಂದರ ಶಿಫಾರಸ್ಸಿಗೆ ಅನುಗುಣವಾಗಿ ಸಮಾಜಕಲ್ಯಾಣ ಖಾತೆ 1964 ಜೂನ್ ತಿಂಗಳಲ್ಲಿ ಸ್ಥಾಪಿತವಾಯಿತು. ಅದೀಗ ಸಮಾಜ ಕಲ್ಯಾಣದ ಹೆಚ್ಚಿನ ಹೊಣೆ ಹೊತ್ತಿದೆ. ಈ ಖಾತೆಯನ್ನು ಬಿಟ್ಟರೆ ಇನ್ನುಳಿದ ವ್ಯವಸ್ಥೆಗಳಲ್ಲಿ ಅತಿಮುಖ್ಯವಾದುದು 1953ರಲ್ಲಿ ಕೇಂದ್ರಸರ್ಕಾರದ ನೆರವಿನೊಂದಿಗೆ ಸ್ಥಾಪಿತವಾದ ಕೇಂದ್ರಸಮಾಜಕಲ್ಯಾಣ ಮಂಡಳಿ. ಮಹಿಳಾ ಸಮಾಜಕಾರ್ಯಕರ್ತರ ಪೈಕಿ ಒಬ್ಬರು ಅಧ್ಯಕ್ಷರಾಗಿರುವ ಈ ಮಂಡಳಿಯಲ್ಲಿ ಸಂ¸ತ್ತಿನ ಪ್ರತಿನಿಧಿಗಳೂ ವಿವಿಧ ಖಾತೆಗಳ ಮುಖ್ಯಸ್ಥರೂ ಕೆಲವು ಸಮಾಜ ಕಾರ್ಯಕರ್ತರೂ ಸದಸ್ಯರಾಗಿರುತ್ತಾರೆ. ಸ್ತ್ರಿ ಹಾಗೂ ಶಿಶುಕಲ್ಯಾಣ ಮತ್ತು ಅಂಗವಿಕಲರ ಕಲ್ಯಾಣ ಅದರ ಮುಖ್ಯ ಹೊಣೆ. ಇದಲ್ಲದೆ ಸಮಾಜ ಕಲ್ಯಾಣದಲ್ಲಿ ನಿರತರಾದ ಸ್ವಯಂಸೇವಾ ಸಂಸ್ಥೆಗಳಿಗೆ ಸಹಾಯಧನ ಹಂಚುವುದೂ ಇದರ ಹೊಣೆ. ರಾಜ್ಯ ಮಟ್ಟದಲ್ಲಿ ಸಮಾಜಕಲ್ಯಾಣ ಸಲಹಾಸಮಿತಿಗಳು ಕೆಲಸ ಮಾಡುತ್ತವೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳಲ್ಲದೆ. ಖಾಸಗೀ ಸಂಸ್ಥೆಗಳು, ಜಾಗತಿಕ ಆರೋಗ್ಯಸಂಸ್ಥೆ, ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಅಂತಾರಾಷ್ಟ್ರೀಯ ಮಕ್ಕಳ ನಿಧಿ ಮೊದಲಾದ ಸಂಸ್ಥೆಗಳೂ ನೆರವಾಗುತ್ತಿವೆ.

ಸ್ತ್ರೀಕಲ್ಯಾಣ: ಸ್ವಾತಂತ್ರ್ಯಾನಂತರ ಸ್ತ್ರೀಯರ ಯೋಗಕ್ಷೇಮಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು ಅನಿವಾರ್ಯವಾಯಿತು. ವಿವಾಹ, ಕುಟುಂಬ, ಆಸ್ತಿ, ಜೀವನಾಂಶ, ವಾರಸುಹಕ್ಕು, ದತ್ತು ಮೊದಲಾದ ವಿಷಯಗಳಿಗೆ ಸಂಬಂಧಪಟ್ಟಂತೆ ಕಾಯಿದೆಗಳು ಬಂದುವಲ್ಲದೆ ಸ್ತ್ರೀಶಿಕ್ಷಣ, ಉದ್ಯೋಗಗಳ ಬಗ್ಗೆ ಅನೇಕ ಕಾರ್ಯಕ್ರಮಗಳು ರೂಪಿತವಾದುವು. 1971ರಲ್ಲಿ ಸಮಿತಿಯೊಂದು ನೇಮಕವಾಗಿ ಸ್ತ್ರೀಯರ ಸ್ಥಾನಮಾನಗಳ ಬಗ್ಗೆ ವರದಿ ಸಲ್ಲಿಸಿದೆ. 1975-76ರಿಂದ ಆರೋಗ್ಯ, ಪೋಷಕಾಹಾರ, ಶಿಶು ಶುಶ್ರೂಷೆ, ಸ್ತ್ರೀಯರ ವೃತ್ತಿ ಶಿಕ್ಷಣಗಳನ್ನೊಳಗೊಂಡ ಸಾಕ್ಷಾರತಾ ಕಾರ್ಯಕ್ರಮ ಜಾರಿಗೆ ಬಂದಿದೆ. 1976ರಲ್ಲಿ ಸಮಾನವೇತನ ಕಾಯ್ದೆಯೂ ಉದ್ಯೋಗಸ್ಥ ಮಹಿಳೆಯರ ಮಕ್ಕಳಿಗಾಗಿ ಶಿಶುಪಾಲನಾಕೇಂದ್ರಗಳನ್ನೂ ಒದಗಿಸಬೇಕೆಂಬ ಕಾರ್ಖಾನೆಗಳ ಕಾಯ್ದೆಗೆ ತಿದ್ದುಪಡಿಮಾಡಲಾಗಿದೆ. 1961ರಲ್ಲಿ ಅಂಗೀಕೃತವಾದ ವರದಕ್ಷಿಣಾ ಪ್ರತಿಬಂಧಕ ಕಾಯ್ದೆಯನ್ನು ತಿದ್ದುಪಡಿಗಳೊಡನೆ ಎಲ್ಲ ರಾಜ್ಯಗಳೂ ಜಾರಿಗೆ ತಂದಿವೆ. ಕೇಂದ್ರ ಸಮಾಜಕಲ್ಯಾಣ ಮಂಡಳಿ ಸ್ತ್ರೀಯರಿಗಾಗಿ ಸಂಕ್ಷಿಪ್ತ ಶಿಕ್ಷಣ ಮತ್ತು ತರಬೇತಿ ಯೋಜನೆಯನ್ನು ಕಾರ್ಯಗತಗೊಳಿಸಿದೆ. ದುಡಿಯುವ ಮಹಿಳೆಯರಿಗಾಗಿ ಈ ತನಕ ದೊಡ್ಡ ನಗರಗಳಲ್ಲಿ 60ಕ್ಕೂ ಹೆಚ್ಚು ವಸತಿಗೃಹಗಳನ್ನು ತೆರೆಯಲಾಗಿದೆ. ಸರ್ಕಾರ 1975ನೆಯ ವರ್ಷವನ್ನು ಅಂತಾರಾಷ್ಟ್ರೀಯ ಮಹಿಳಾವರ್ಷವೆಂದು ಘೋಷಿಸಿದ್ದು ಸ್ತ್ರೀ ಕಲ್ಯಾಣದಲ್ಲಿ ಆಸಕ್ತಿತೋರಿದೆ. ಅಖಿಲ ಭಾರತ ಸ್ತ್ರೀಪರಿಷತ್ತು, ರಾಷ್ಟ್ರೀಯ ಸ್ತ್ರೀಮಂಡಳಿ, ನೈತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಸಂಘ, ವೈ. ಡಬ್ಲ್ಯೂ.ಸಿ.ಎ. ಕಸ್ತೂರಿಬಾ ಸ್ಮಾರಕನಿಧಿ ಮೊದಲಾದ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಮಕ್ಕಳ ಕಲ್ಯಾಣ: ಮಕ್ಕಳೆಂದರೆ ವೆಚ್ಚದ ಬಾಬತ್ತುಗಳಲ್ಲ, ಅವು ರಾಷ್ಟ್ರದ ಅಮೂಲ್ಯ ಸಂಪತ್ತು ಎಂಬ ಅರಿವೂ ಈ ಸಂಪತ್ತನ್ನು ಸರಿಯಾಗಿ ಜೋಪಾನ ಮಾಡುವುದು ನಮ್ಮ ಕರ್ತವ್ಯ ಎಂಬ ಪ್ರಜ್ಞೆಯೂ ಉಂಟಾದ ಅನಂತರ ಮಕ್ಕಳ ಕಲ್ಯಾಣ ತ್ವರಿತವಾಗಿ ನಡೆಯುತ್ತಿದೆ. ಶಿಶುಕಲ್ಯಾಣ ರಾಷ್ಟ್ರದ ಕರ್ತವ್ಯ ಎಂಬುದನ್ನು ಸಂವಿಧಾನದಲ್ಲಿ ಒಪ್ಪಿಕೊಳ್ಳಲಾಗಿದೆ. 14 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಉಚಿತ ಕಡ್ಡಾಯ ಶಿಕ್ಷಣ ಕೊಡಬೇಕೆಂದು ರಾಜ್ಯ ನಿರ್ದೇಶನ ಸೂತ್ರದಲ್ಲಿ ಹೇಳಿದೆ. ಸದ್ಯ 6-11 ವಯಸ್ಸಿನ ಮಕ್ಕಳಿಗೆ ಈ ಸೌಲಭ್ಯ ಇದೆ. 1-6 ವರ್ಷದ ಮಕ್ಕಳಿಗೆ ಪೂರ್ವಪ್ರಾಥಮಿಕ ಶಿಕ್ಷಣವನ್ನೂ ಆಟಪಾಟದ ಸವಲತ್ತುಗಳನ್ನೂ ಖಾಸಗಿ ಮತ್ತು ಅರೆಸರ್ಕಾರಿ ವ್ಯವಸ್ಥೆಗಳು ಒದಗಿಸುತ್ತಿವೆ. ಗುಡ್ಡಗಾಡು ಪ್ರದೇಶ ಮತ್ತು ಕೊಳಚೆ ಪ್ರದೇಶಗಳಲ್ಲಿರುವ ಆರುವರ್ಷದ ಒಳಗಿನ ಮಕ್ಕಳಿಗೆ ಸರ್ಕಾರ ಪೋಷಕಾಹಾರ ಕೊಡುವ ಕಾರ್ಯಕ್ರಮವಿದೆ. ರೋಗನಿರೋಧ, ವೈದ್ಯಕೀಯ ತಪಾಸಣೇ, ಚಿಕಿತ್ಸೆ, ಶಿಕ್ಷಣ ಮತ್ತು ಪೋಷಕಾಹಾರಗಳನ್ನು ಒಟ್ಟಿಗೆ ಕೊಡುವ ಸಂಯೋಜಿತ ಕಾರ್ಯಕ್ರಮವನ್ನೂ ಪ್ರಾರಂಭಿಸಲಾಗಿದೆ. ಈ ಉದ್ದೇಶಕ್ಕಾಗಿ 1978ರಲ್ಲಿ ಗ್ರಾಮೀಣ ಪ್ರದೇಶದಲ್ಲಿ 18 ಕೇಂದ್ರಗಳೂ ಗುಡ್ಡಗಾಡು ಪ್ರದೇಶದಲ್ಲಿ 11 ಕೇಂದ್ರಗಳೂ ನಗರ ಪ್ರದೇಶದಲ್ಲಿ 4 ಕೇಂದ್ರಗಳೂ ಕೆಲಸಮಾಡುತ್ತಿದ್ದುವು. ಆಪತ್‍ಗ್ರಸ್ತಮಕ್ಕಳು, ಪರಿತ್ಯಕ್ತ ಮಕ್ಕಳು, ನಿರ್ಲಕ್ಷಿತ ಮಕ್ಕಳು, ಸ್ತ್ರೀಕಾರ್ಮಿಕರ ಮಕ್ಕಳು ಪರಿಮಿತ ಸಂಖ್ಯೆಯಲ್ಲಾದರೂ ಈಗ ರಕ್ಷಣೆ ಪಡೆಯುತ್ತಿದ್ದಾರೆ. 1976-77ರಲ್ಲಿ ಈ ಉದ್ದೇಶಕ್ಕಾಗಿ ಸುಮಾರು ರೂ 2 ಕೋಟಿ ಖರ್ಚಾಗಿದೆ. ಮಕ್ಕಳ ಮನರಂಜನೆ. ವಾಚನಾಲಯ ಮಕ್ಕಳ ಮೇಳಗಳಿಗಾಗಿ ಅನುಕೂಲಗಳನ್ನು ಕಲ್ಪಿಸಲಾಗಿದೆ. 1974ರಲ್ಲಿ ಭಾರತ ಸರ್ಕಾರ ಒಪ್ಪಿಕೊಂಡ ರಾಷ್ಟ್ರೀಯ ಧೋರಣೆಗೆ ಅನುಗುಣವಾಗಿ ಮಕ್ಕಳಿಗಾಗಿ ರಾಷ್ಟ್ರೀಯ ಮಂಡಳಿಯೊಂದನ್ನು ಸ್ಥಾಪಿಸಲಾಗಿದೆ. ಸರ್ಕಾರಿ ಹಾಗೂ ಅರೆಸರ್ಕಾರಿ ವ್ಯವಸ್ಥೆಗಳ ಜೊತೆಗೆ ಜಾಗತಿಕ ಆರೋಗ್ಯ ಸಂಸ್ಥೆ, ಅಂತಾರಾಷ್ಟ್ರೀಯ ಮಕ್ಕಳ ನಿಧಿ, ಅಂತಾರಾಷ್ಟ್ರೀಯ ಮಕ್ಕಳಕಲ್ಯಾಣ ಸಂಸ್ಥೆ ಮುಂತಾದ ಸಂಸ್ಥೆಗಳು ಸಹಾಯಮಾಡುತ್ತಿವೆ. 1979ನೆಯ ವರ್ಷವನ್ನು ಅಂತಾರಾಷ್ಟ್ರೀಯ ಮಕ್ಕಳ ವರ್ಷವೆಂದು ಆಚರಿಸಲಾಯಿತು.

ಯುವಜನ ಕಲ್ಯಾಣ: ಕೇಂದ್ರ ಮತ್ತು ರಾಜ್ಯಸರ್ಕಾರದ ಅನೇಕ ಖಾತೆಗಳು ಯುವಜನ ಕಲ್ಯಾಣಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇವುಗಳಲ್ಲಿ ಸ್ವಯಂಸೇವಾಸಂಸ್ಥೆಗಳೂ ಪಾಲ್ಗೊಂಡಿವೆ. ಯುವಜನಕಲ್ಯಾಣ ಕಾರ್ಯಕ್ರಮಗಳ ಪೈಕಿ ಕೆಲವನ್ನು ಇಲ್ಲಿ ಹೆಸರಿಸಬಹುದು. ಕ್ರೀಡೆ ಮತ್ತು ಮನರಂಜನೆಗೆ ಪ್ರೋತ್ಸಾಹ, ರಾಷ್ಟ್ರೀಯ ಸೇವಾಯೋಜನೆ, ಎನ್.ಸಿ.ಸಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ, ಶರೀರ ಶಿಕ್ಷಣ ಕೇಂದ್ರಗಳ ಸ್ಥಾಪನೆ, ಯುವಕ ಮಂಡಳಿ ಮತ್ತು ಯುವಜನ ವಸತಿಗೃಹಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಯೋಗ್ಯ ಬೆಲೆಯಲ್ಲಿ ಆವಶ್ಯಕ ವಸ್ತುಗಳ ಸರಬರಾಜು, ಯುವಜನರಿಗೆ ಸ್ವಂತ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು, ಅಪ್ರೆಂಟಿಸ್ ಕಾಯ್ದೆಯಂತೆ ತರಬೇತಿ ಮತ್ತು ಉದ್ಯೋಗಾವಕಾಶ, ಯುವ ಉದ್ದಿಮೆದಾರರಿಗೆ ಬ್ಯಾಂಕ್ ಸಾಲ ದೊರಕಿಸುವುದು ಇತ್ಯಾದಿ.

ಅಂಗವಿಕಲರ ಕಲ್ಯಾಣ: ಅಂಗವಿಕಲತೆ ಪೂರ್ವಾರ್ಜಿತ ಪಾಪ-ಪುಣ್ಯಗಳ ಫಲವೆಂದು ನಂಬುತ್ತಿದ್ದ ನಮ್ಮ ದೇಶದಲ್ಲಿ ಈಗ ಅಂಗವಿಕಲರ ಕಲ್ಯಾಣ ಸಾಧಿಸಬಹುದೆಂಬ ಅರಿವು ಮೂಡಿದೆ. ಕುರುಡರು, ಕಿವುಡರು, ಮೂಗರು, ಅಂಗಹೀನರು ಮತ್ತು ಮನೋದೌರ್ಬಲ್ಯವುಳ್ಳವರು ಕಲ್ಯಾಣಕಾರ್ಯಕ್ರಮಗಳ ವ್ಯಾಪ್ತಿಯೊಳಗೆ ಬರುತ್ತಾರೆ. ಕುರುಡರಿಗಾಗಿ ಈ ತನಕ 140 ಶಾಲೆಗಳೂ ತರಬೇತಿಕೇಂದ್ರಗಳೂ ಸ್ಥಾಪಿತವಾಗಿವೆ. ಡೆಹರಾಡೂನಿನಲ್ಲಿ ಕುರುಡರ ರಾಷ್ಟ್ರೀಯ ಕೇಂದ್ರವೊಂದಿದ್ದು ಅದು ತರಬೇತಿಯ ಜೊತೆಗೆ ಬ್ರೇಲ್ ಉಪಕರಣಗಳ ಕಾರ್ಯಾಗಾರ, ವಾಚನಾಲಯಗಳನ್ನೂ ನಡೆಸುತ್ತಿದೆ. ಅಂಧರ ಶಿಕ್ಷಣಕ್ಕಾಗಿ ಬೇಕಾದ ಶಿಕ್ಷಕರನ್ನು ತರಬೇತಿಗೊಳಿಸುವ ನಾಲ್ಕು ಕೇಂದ್ರಗಳಿವೆ. ಹೈದರಾಬಾದಿನಲ್ಲಿ ಕಿವುಡರಿಗಾಗಿ ರಾಷ್ಟ್ರೀಯ ಕೇಂದ್ರ ಸ್ಥಾಪನೆಯಾಗಿದೆ. ಈ ಕೇಂದ್ರದಲ್ಲಿ ಪೂರ್ಣ ಕಿವುಡರಾದ ವಯಸ್ಕರಿಗೂ ಅರೆವಾಸಿ ಕಿವುಡರಾದ ಮಕ್ಕಳಿಗೂ ತರಬೇತಿ ಸೌಕರ್ಯವಿದೆ. ಕಲ್ಕತ್ತಾದಲ್ಲಿ ಅಂಗಹೀನರಿಗಾಗಿ ರಾಷ್ಟ್ರೀಯ ಸಂಸ್ಥೆಯೊಂದನ್ನು ಸ್ಥಾಪಿಸಲಾಗಿದೆ. ಮಾನಸಿಕವಾಗಿ ಅಸ್ವಸ್ಥರಾದ ಚಿಕ್ಕಮಕ್ಕಳಿಗಾಗಿ ದಿಲ್ಲಿಯಲ್ಲಿಯೂ ಇತರೆಡೆಗಳಲ್ಲಿಯೂ ಶಾಲೆಗಳಿವೆ. ಅಂಗವಿಕಲರು ಸ್ವತಂತ್ರವಾಗಿ ಬಾಳಲು ಪ್ರೋತ್ಸಾಹ ಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸೇವೆಗಳಲ್ಲಿ ಹಾಗೂ ಸಾರ್ವಜನಿಕ ಉದ್ದಿಮೆ ಸಂಸ್ಥೆಗಳಲ್ಲಿ ಸಿ ಮತ್ತು ಡಿ ಶ್ರೇಣಿಯ ಹುದ್ದೆಗಳ ಪೈಕಿ ಶೇಕಡಾ 3ರಷ್ಟು ಅಂಗವಿಕಲರಿಗಾಗಿ ಕಾಯ್ದಿರಿಸಲಾಗಿದೆಯಲ್ಲದೆ ಅವರನ್ನು ಪ್ರೋತ್ಸಾಹಿಸುವ ಸಂಸ್ಥೆಗಳಿಗೆ ರಾಷ್ಟ್ರೀಯ ಬಹುಮಾನಗಳನ್ನೂ ಕೊಡಲಾಗುತ್ತಿದೆ. ಅಂಗವಿಕಲರಿಗಾಗಿ 77 ವಿಶೇಷ ಉದ್ಯೋಗ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಂಗವಿಕಲರ ಕಲ್ಯಾಣದಲ್ಲಿ ತೊಡಗಿರುವ ಖಾಸಗೀ ಸಂಸ್ಥೆಗಳಿಗೆ ಶೇಕಡಾ 90 ಸಹಾಯಧನ ಕೊಡಲಾಗುತ್ತಿದೆ.
ಸಮಾಜ ಸಂರಕ್ಷಣೆ: ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ದುಷ್ಟಶಕ್ತಿಗಳಿಂದ ನಿಸ್ಸಹಾಯಕ ವ್ಯಕ್ತಿಗಳನ್ನೂ ವರ್ಗಗಳನ್ನೂ ಪಾರುಮಾಡಲು ಭಾರತ ಸರ್ಕಾರ ಕೆಲವು ಪ್ರತಿಬಂಧಕೋಪಾಯಗಳನ್ನೂ ಶಾಸನಗಳನ್ನೂ ಪ್ರವರ್ತಿಸಿದೆ. ಉದಾಹರಣೆಗೆ 41 ವೇಶ್ಯಾಗೃಹಗಳಿಂದ ಪಾರು ಮಾಡಲ್ಪಟ್ಟ ಸ್ತ್ರೀಯರಿಗೆ ಆಶ್ರಯಕೊಡುವ ರಕ್ಷಣಾಗೃಹಗಳಿವೆ. ಅನೈತಿಕ ವ್ಯವಹಾರಗಳಲ್ಲಿ ಸ್ತ್ರೀಯರನ್ನು ತೊಡಗಿಸುವವರನ್ನು ಶಿಕ್ಷಿಸುವ ಕಾಯಿದೆಯೊಂದನ್ನು 1956ಕ್ಕೆ ಮೊದಲೇ ಜಾರಿಗೆ ತರಲಾಗಿತ್ತು. ಬಾಲಾಪರಾಧವನ್ನು ನಿಗ್ರಹಿಸುವ ಕೇಂದ್ರ ಕಾಯಿದೆ 1960ರಲ್ಲಿ ರೂಪಿತವಾಗಿದೆ. ಎಲ್ಲಾ ರಾಜ್ಯಗಳಲ್ಲಿಯೂ ಇದೇ ಮಾದರಿಯ ಕಾಯಿದೆಗಳಿವೆ. ಬಾಲನ್ಯಾಯಾಲಯಗಳೂ ರಿಮ್ಯಾಂಡ್ ಹೋಮ್‍ಗಳೂ ಪ್ರಮಾಣಿತ ಶಾಲೆಗಳೂ ಮಕ್ಕಳ ಕಲ್ಯಾಣ ಮಂಡಳಿಗಳೂ ಸ್ಥಾಪಿತವಾಗಿವೆ. ಕೈದಿಗಳ ಕಲ್ಯಾಣಕ್ಕಾಗಿ ಅನೇಕ ಪ್ರಯತ್ನಗಳಾಗಿವೆ. 21 ವರ್ಷದ ಒಳಗಿನ ಅಪರಾಧಿಗಳ ವಿಷಯಗಳಲ್ಲಿ ಪ್ರೊಬೇಷನ್ ಅಧಿಕಾರಿಗಳ ಸಲಹೆ ಪಡೆಯುವುದನ್ನು ಜಾರಿಗೆ ತರಲಾಗಿದೆ. ಭಿಕ್ಷಾವೃತ್ತಿಯನ್ನು ನಿಗ್ರಹಿಸುವ ಹಾಗೂ ಭಿಕ್ಷುಕರ ಕಲ್ಯಾಣವನ್ನು ಸಾಧಿಸುವ ಪ್ರಯತ್ನಗಳೂ ನಡೆದಿವೆ.

ಸಾಮಾಜಿಕ ಭದ್ರತೆ: 1948ರಿಂದ ಈಚೆಗೆ ಸಾಮಾಜಿಕ ಭದ್ರತೆಗೆ ಭದ್ರ ಬುನಾದಿ ದೊರೆಯಿತು. ನೌಕರರ ರಾಜ್ಯ ವಿಮಾ ಯೋಜನೆ ಮತ್ತು ಕಲ್ಲಿದ್ದಲು ಗಣಿ ನೌಕರರ ಕ್ಷೇಮನಿಧಿ (1948), ನೌಕರರ ಕ್ಷೇಮನಿಧಿ(1952) ಉದ್ಯೋಗಸ್ಥ ಮಹಿಳೆಯ ಹೆರಿಗೆ-ಬಾಣಂತಿ ದಿನಗಳಲ್ಲಿ ಪಡೆಯುವ ಮಾತೃತ್ವ ಸೌಲಭ್ಯಗಳು (1961), ನೌಕರರ ಕುಟುಂಬ ಪಿಂಚಣಿ ಯೋಜನೆ (1971), ಗ್ರಾಚ್ಯುಟಿ ಯೋಜನೆ (1972) ಮುಂತಾದವು ಕಾಯಿಲೆ, ಔದ್ಯೋಗಿಕ ಅಪಘಾತ, ಹೆರಿಗೆ ಬಾಣಂತನ, ವೃದ್ಧಾಪ್ಯ ಮೊದಲಾದ ಸಂದರ್ಭಗಳಲ್ಲಿ ಕೆಲಸಗಾರರಿಗೆ ಭದ್ರತೆ ಒದಗಿಸುತ್ತವೆ.

ದುರ್ಬಲವರ್ಗಗಳ ರಕ್ಷಣೆ: ಭಾರತ ಸಂವಿಧಾನದ 46ನೆಯ ಕಲಮಿನಲ್ಲಿ ರಾಜ್ಯ ದುರ್ಬಲವರ್ಗದ ಜನರ, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಜನಾಂಗದ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಹೆಚ್ಚು ಕಾಳಜಿಪೂರ್ವಕವಾಗಿ ಬೆಳೆಸಬೇಕು. ಹಾಗೂ ಈ ಜನರನ್ನು ಸಾಮಾಜಿಕ ಅನ್ಯಾಯ ಮತ್ತು ಎಲ್ಲ ಬಗೆಯ ಶೋಷಣೆಗಳಿಂದ ರಕ್ಷಿಸಬೇಕು ಎಂಬುದಾಗಿ ಹೇಳಲಾಗಿದೆ. ಈ ನಿರ್ದೇಶಕ ತತ್ತ್ವವನ್ನು ಅನುಷ್ಠಾನಗೊಳಿಸಲು ಕಾನೂನುಗಳೂ ಕಾರ್ಯಕ್ರಮಗಳೂ ರೂಪಿತವಾಗಿವೆ. ಸಂವಿಧಾನದ 15,17,25,46, 244, 320 ಮತ್ತು 330ರಿಂದ 338 ಮತ್ತಿತರ ಕಲಮುಗಳಲ್ಲಿ ವಿವಿಧ ರಕ್ಷಣೆಗಳನ್ನು ಹೇಳಲಾಗಿದೆ. 1955ರಲ್ಲಿ ಜಾರಿಗೆ ತಂದ ಅಸ್ಪøಶತಾ (ಅಪರಾಧ) ಕಾಯಿದೆಯನ್ನು ಹೆಚ್ಚು ಬಿಗಿಗೊಳಿಸಿ 1976ರಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯಿದೆಯ ರೂಪದಲ್ಲಿ ಅಂಗೀಕರಿಸಲಾಗಿದೆ. ಸಂವಿಧಾನದ 330 ಮತ್ತು 332ನೆಯ ವಿಧಿಗಳಿಗೆ ಅನುಸಾರವಾಗಿ ಪರಿಶಿಷ್ಟಜಾತಿಗಳಿಗೆ ಲೋಕಸಭೆಯಲ್ಲಿ 78 ಸ್ಥಾನಗಳನ್ನೂ ವಿಧಾನ ಸಭೆಗಳಲ್ಲಿ 540 ಸ್ಥಾನಗಳನ್ನೂ ಪರಿಶಿಷ್ಟ ಜನಾಂಗಗಳಿಗೆ ಅನುಕ್ರಮವಾಗಿ 38 ಮತ್ತು 287 ಸ್ಥಾನಗಳನ್ನೂ ಕಾದಿರಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೇವೆಗಳಲ್ಲಿ ಎಲ್ಲ ದುರ್ಬಲ ವರ್ಗಗಳಿಗೆ ಮೀಸಲಾತಿ ಇದೆ. ಅಖಿಲ ಭಾರತ ಆಯ್ಕೆಗಳಲ್ಲಿ ಮೀಸಲಾತಿಯ ಪ್ರಮಾಣ ಪರಿಶಿಷ್ಟ ಜಾತಿಗಳಿಗೆ ಶೇಕಡಾ 15 (ಕೆಲವೊಮ್ಮೆ ಶೇಕಡಾ 16 2/3) ಮತ್ತು ಪರಿಶಿಷ್ಟ ಜನಾಂಗಗಳಿಗೆ ಶೇಕಡಾ 7 1/2 ಇದೆ. ಇತರ ಹಿಂದುಳಿದ ವರ್ಗಗಳಿಗಾಗಿ ಈ ಪ್ರಮಾಣ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ದುರ್ಬಲ ವರ್ಗಗಳ ಸ್ಥಿತಿಗತಿಗಳ ಹಾಗೂ ರಕ್ಷಣೆಗಳ ಬಗ್ಗೆ ರಾಷ್ಟ್ರಾಧ್ಯಕ್ಷರಿಗೆ ವರದಿ ಮಾಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗಗಳ ಕಮಿಷನರ್ ಎಂಬ ವಿಶೇಷ ಅಧಿಕಾರಿಯೊಬ್ಬ ಇದ್ದಾನೆ. ಅಲ್ಲದೆ ಸಂಸತ್ತಿನ ಸ್ಥಾಯೀ ಸಮಿತಿಯೊಂದು ಇವರ ಯೋಗಕ್ಷೇಮವನ್ನು ಸದಾ ವಿಚಾರಿಸುತ್ತದೆ. ಕೇಂದ್ರದಲ್ಲಿ ಈ ಕಲ್ಯಾಣ ಕಾರ್ಯಕ್ರಮಗಳನ್ನು ಗೃಹವ್ಯವಹಾರಗಳ ಖಾತೆ ನೋಡಿಕೊಂಡರೆ ರಾಜ್ಯಗಳಲ್ಲಿ ಇದಕ್ಕೆ ಪ್ರತ್ಯೇಕ ಖಾತೆಗಳಿವೆ. ಈ ಕಾರ್ಯದಲ್ಲಿ ಆಸಕ್ತಿ ವಹಿಸುವ ಸರ್ಕಾರೇತರ ಸಂಸ್ಥೆಗಳ ಪೈಕಿ ಮುಖ್ಯವಾದವು: ಭಾರತೀಯ ಆದಿಮಜಾತಿ ಸೇವಕಸಂಘ, ಹರಿಜನ ಸೇವಕ ಸಂಘ, ಭಾರತೀಯ ರೆಡ್‍ಕ್ರಾಸ್, ಡಿಪ್ರೆಸ್ಡ್‍ಕ್ಲಾಸ್ ಲೀಗ್, ರಾಮಕೃಷ್ಣ ಮಿಷನ್, ಠಕ್ಕರ್ ಬಾಪಾ ಆಶ್ರಮ, ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ.

	ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ರೂ 30 ಕೋಟಿ ಖರ್ಚಾಗಿದ್ದರೆ 5ನೆಯ ಯೋಜನೆಯಲ್ಲಿ ಸುಮಾರು ರೂ 500 ಕೋಟಿ ಎಂದು ಅಂದಾಜು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭೂಮಿ ಮತ್ತು ನೀರಾವರಿ ಸೌಕರ್ಯ ಒದಗಿಸುವುದು, ಭೂದಾನ ಮತ್ತು ಪಡುಭೂಮಿಯನ್ನು ವಿತರಿಸುವುದು, ಕೃಷಿ ಉಪಕರಣ ಕೊಡುವುದು, ವಿವಿಧೋದ್ದೇಶ ಸಹಕಾರಿ ಸಂಸ್ಥೆಗಳನ್ನು ಸ್ಥಾಪಿಸುವುದು ಸಾಲ ಕೊಡುವುದು, ಕುಡಿಯುವ ನೀರು ಹಾಗೂ ದೀಪ ಒದಗಿಸುವುದು, ಮನೆ ಅಥವಾ ನಿವೇಶನಗಳನ್ನು ಉಚಿತವಾಗಿ ಹಂಚುವುದು, ಉಚಿತ ಶಿಕ್ಷಣವ್ಯವಸ್ಥೆ, ಶಾಲೆ ಕಟ್ಟಡ ಕಟ್ಟುವುದು, ಮೆಟ್ರಿಕ್ ಅನಂತರದ ವಿದ್ಯಾಭ್ಯಾಸಕ್ಕೆ ಶಿಷ್ಯವೃತ್ತಿ ಕೊಡುವುದು ವಿದ್ಯಾರ್ಥಿನಿಯರಿಗೆ ಉಚಿತ ವಸತಿಗೃಹ ಸೌಕರ್ಯ ಒದಗಿಸುವುದು, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಧನಸಹಾಯ ಒದಗಿಸುವುದು-ಇವೇ ಮುಂತಾದ ಕಾರ್ಯಗಳಲ್ಲಿ ತೊಡಗಿವೆ. ಆದಿವಾಸಿ ಸಂಸ್ಕøತಿ ಮತ್ತು ಸಮಸ್ಯೆಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆ ನಡೆಸುವ 11 ಸಂಶೋಧನ ಕೇಂದ್ರಗಳೂ ಅಸ್ತಿತ್ವದಲ್ಲಿವೆ. 	
(ಎಚ್.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ